ಕ್ಷಯಾಣುಸಾರ  
  
ಕ್ಷಯ ದಂಡಾಣುಜೀವಿಯ ಪ್ರೋಟೀನಿನ ಅಂಶಕ್ಕೆ ಒಬ್ಬ ವ್ಯಕ್ತಿಯ ಅಂಗಾಂಶ ಸಂವೇದನೆ (ಸೆನ್ಸಿಟಿವಿಟಿ) ತೋರ್ಪಡಿಸುವುದೋ ಇಲ್ಲವೋ ಎನ್ನುವುದನ್ನು ಕಂಡುಕೊಳ್ಳಲು ರೋಗನಿದಾನದ ಚರ್ಮ ಪರೀಕ್ಷೆಗಳಲ್ಲಿ ಬಳಸುವ ಕ್ಷಯ ದಂಡಾಣುಜೀವಿಗಳ ಸಾರ (ಟ್ಯೂಬರ್‍ಕ್ಯುಲಿನ್).  ರೋಗ ಹೊಮ್ಮಿರಲಿ ಇಲ್ಲದಿರಲಿ ಕ್ಷಯಾಣುಗಳಿಂದ ಮುಂಚೆಯೇ ಸೋಂಕಾಗಿದ್ದರೆ ಅಂಗಾಂಶಗಳು ಕ್ಷಯಾಣುವಿನ ಪ್ರೋಟೀನಿಗೆ ಸಂವೇದನೀಯವಾಗಿರುವುದೇ ಇದರ ಆಧಾರ.  ಮುಂದೋಳಿನ ಮುಂಭಾಗದ ಚರ್ಮದೊಳಕ್ಕೆ ಕ್ಷಯಸಾರವನ್ನು ಚುಚ್ಚಿ ಹೊಗಿಸುವುದರಿಂದ ಇದನ್ನು ಕಂಡುಹಿಡಿಯಬಹುದು.  ಹೀಗೆ ಚುಚ್ಚಿದಾಗ ಸ್ಥಳೀಯ ಪ್ರತಿಕ್ರಿಯೆ, ಸಾರ್ವತ್ರಿಕ (ಅಂದರೆ ಇಡೀ ದೇಹಕ್ಕೆ ಅನ್ವಯಿಸುವಂತೆ) ಪ್ರತಿಕ್ರಿಯೆಯ ಸಮೇತ ಅಥವಾ ಇಂಥ ಪ್ರತಿಕ್ರಿಯೆ ಇಲ್ಲದೇ, ಕಂಡುಬರಬಹುದು.  ಇದು ಧನಾತ್ಮಕ ಪ್ರತಿಕ್ರಿಯೆ.  ಇದರ ಅರ್ಥ ಅಂಗಾಂಶಗಳು ಸಂವೇದನೀಯವಾಗಿದೆ ಎಂದು.  ಇಂಥ ಯಾವ ಪ್ರತಿಕ್ರಿಯೆಯೂ ಕಂಡುಬರದಿದ್ದರೆ (ಋಣಾತ್ಮಕ ಸನ್ನಿವೇಶ) ಸಂವೇದನೆ ಇಲ್ಲ ಎಂದು ಅರ್ಥವಾಗುವುದು.  ಆ ವ್ಯಕ್ತಿಗೆ ಸಾಮಾನ್ಯವಾಗಿ ಹಿಂದೆಂದೂ ಕ್ಷಯ ದಂಡಾಣುಜೀವಿ ತಾಗಿರುವುದಿಲ್ಲ ಎಂದು ತರ್ಕಿಸಬಹುದು.

ಕ್ಷಯಾಣುಸಾರವನ್ನು ಮೊದಲಿಗೆ ತಯಾರಿಸಿದವ ರಾಬರ್ಟ್‍ಕಾಕ್.  ಗ್ಲಿಸರಾಲ್ ರಸವನ್ನು ಇವನು ದ್ರವ ಪೋಷಕ ಮಾಧ್ಯಮವಾಗಿ ಉಪಯೋಗಿಸಿಕೊಂಡ. ಆರು ವಾರಗಳ ಕಾಲ ಕ್ಷಯದ ದಂಡಾಣುಗಳನ್ನು ಈ ಮಾಧ್ಯಮದಲ್ಲಿ ಕಾಕ್ ಬೆಳೆಸಿ (ಈಗ ಇದಕ್ಕೆ ಕಾಕ್‍ನ ಹಳೆಯ ಕ್ಷಯಸಾರ ಎಂದು ಹೆಸರಾಗಿದೆ).  ಮುಂದೆ 50% ರಷ್ಟು ಗ್ಲಿಸರಾಲಿನಲ್ಲಿ ದಂಡಾಣುಗಳನ್ನು ಅರೆದು (ಆತನ ಹೆಸರಿನ) ಹೊಸ ಕ್ಷಯ ಸಾರವನ್ನು ತಯಾರಿಸಿದ.  ದಂಡಾಣುಗಳನ್ನು ಬೆಳೆಸಲು ಬಳಸಿದ ಪೋಷಕ ಮಾಧ್ಯಮಗಳ ಅಂಶಗಳಿಂದ ಬಂದ ಬೇಡದ ಪ್ರೋಟೀನುಗಳೂ ಇಂಥ ಕಚ್ಚಾ ಸಾರಗಳಲ್ಲಿ ಇದ್ದೇ ಇರುತ್ತವೆ.  ಚರ್ಮ ಪರೀಕ್ಷೆಗಳಲ್ಲಿ ವಿಶಿಷ್ಟವಲ್ಲದ ಪ್ರತಿಕ್ರಿಯೆಗಳನ್ನು ಉಂಟುಮಾಡಿಸುವ ಇಂಥ ಅನಾವಶ್ಯಕ ವಸ್ತುಗಳನ್ನು ಪೂರ್ತಿ ಕಳೆಯಲು ಹಲವಾರು ಬಗೆಯ ಪರಿಷ್ಕರಣ ವಿಧಾನಗಳಿವೆ.  ಕ್ಷಯ ದಂಡಾಣುವಿನಿಂದ ನಿರ್ದಿಷ್ಟವಾದ ಶುದ್ಧ ಪ್ರೋಟೀನನ್ನು ಬೇರೆಯಾಗಿ ಸಾರೀಕರಿಸಲಾಗಿದೆ.  ಇದಕ್ಕೆ ಶುದ್ಧೀಕೃತ ಪ್ರೋಟೀನ್ ಉತ್ಪನ್ನವೆಂದು ಹೆಸರು.  ಇದು ರಚನೆಯಲ್ಲಿ ಹೆಚ್ಚು ಸ್ಥಿರವಾದದ್ದು.  ಇದನ್ನು ಬಳಸಿದಾಗ ವಿಶಿಷ್ಟವಲ್ಲದ ಪ್ರತಿಕ್ರಿಯೆಗಳಾದವು.  ಹಾಗಾಗಿ ಈ ಉತ್ಪನ್ನ ಹೆಚ್ಚು ಪ್ರಿಯವಾಗಿದೆ.    (ಕೆ.ವಿ.ಜಿ)